ಮನೋವಿಜ್ಞಾನದ ವಿಧಾನಗಳು - 
ಮನುಷ್ಯನ ವರ್ತನೆಯನ್ನು ವಿವರಿಸಲು ಅರ್ಥಮಾಡಿಕೊಳ್ಳಲು ನಿಯಂತ್ರಿಸಲು ಮತ್ತು ಯಾವ ಸನ್ನಿವೇಶದಲ್ಲಿ ಎಂಥ ವರ್ತನೆ ಪ್ರಕಟವಾಗುತ್ತದೆ ಎಂಬುದರ ಬಗ್ಗೆ ನಿಖರ ಭವಿಷ್ಯ ನುಡಿಯಲು ಅಗತ್ಯವಾದ ಸಾರ್ವತ್ರಿಕರಣಗಳನ್ನು ರೂಪಿಸಲು ಉಪಯೋಗಿಸಲಾಗುವ ಅನೇಕ ವೈಜ್ಞಾನಿಕ ವಿಧಾನಗಳು (ಮೆತೆಡ್ಸ್ ಇನ್ ಸೈಕಾಲಜಿ). ಇವನ್ನು ವಿವರಣಾತ್ಮಕ ಹಾಗೂ ಪ್ರಯೋಗಾತ್ಮಕ ಎಂದು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ವರ್ತನೆಯ ವಿವರಣೆ ಮತ್ತು ವರ್ಗೀಕರಣ ಮೊದಲನೆಯ ವರ್ಗದ ವಿಧಾನಗಳ ಗುರಿ. ವರ್ತನೆಗೆ ಸಂಬಂಧಿಸಿದಂತೆ ರೂಪಿಸಲಾಗುವ ನಿರ್ದಿಷ್ಟ ತತ್ತ್ವಗಳ ನಿಖರತೆಯನ್ನು ವೈಜ್ಞಾನಿಕ ಪ್ರಯೋಗದ ಒರೆಗಲ್ಲಿಗೆ ತಿಕ್ಕಿ ಪರೀಕ್ಷಿಸುವುದು. ನಿರ್ದಿಷ್ಟ ವರ್ತನೆಗೆ ಸಂಬಂಧಿಸಿದಂತೆ ನಿಖರವಾದ ಕಾರ್ಯಕಾರಣ ಸಂಬಂಧಗಳನ್ನು ಪತ್ತೆ ಹಚ್ಚುವುದು ಎರಡನೆಯ ವರ್ಗದ ವಿಧಾನಗಳ ಗುರಿ, ಸ್ವಾಭಾವಿಕ ವೀಕ್ಷಣೆ (ನ್ಯಾಚುರಲಿಸ್ಟಿಕ್ ಅಬ್ಸರ್ವೇಷನ್). ಸರ್ವೇಕ್ಷಣೆ ಚಿಕಿತ್ಸಾಕ್ರಮವಾದ ಕೆಲವು ತಂತ್ರಗಳು-ಇವು ವಿವರಣಾತ್ಮಕ ವರ್ಗಕ್ಕೆ ಸೇರುವ ಪ್ರಮುಖ ವಿಧಾನಗಳು.

ಸ್ವಾಭಾವಿಕ ಸನ್ನಿವೇಶಗಳಲ್ಲಿ ಪ್ರಕಟವಾಗುವ ಸಹಜವರ್ತನೆಯ ಅಧ್ಯಯನ ಸ್ವಾಭಾವಿಕ ವೀಕ್ಷಣೆಯ ಪ್ರಧಾನಗುರಿ. ವೀಕ್ಷಕ ಅಧ್ಯಯನಕ್ಕೊಳಗಾದ ವ್ಯಕ್ತಿಗಳಿಂದ ದೂರದಲ್ಲಿದ್ದು ಅಥವಾ ಅವರಲ್ಲಿ ಒಬ್ಬನಂತೆ ವರ್ತಿಸುತ್ತಿದ್ದು, ಚಲನಚಿತ್ರ ಕ್ಯಾಮರಗಳು ಧ್ವನಿಮುದ್ರಕಗಳು, ತಪಶೀಲು ಪಟ್ಟಿಗಳು (ಚೆಕ್ ಲಿಸ್ಟ್ಸ್). ದರ್ಜಾಮಾಪನಿಗಳು ಇವೇ ಮೊದಲಾದ ಸಾಧನಗಳಿಂದ ವೀಕ್ಷಿತ ತಥ್ಯಗಳನ್ನು ದಾಖಲಾತಿ ಮಾಡುತ್ತಾನೆ. ಕ್ಷೇತ್ರಾಧ್ಯಯನ ವಿಧಾನ (ಫೀಲ್ಡ್ ಸ್ಟಡಿ ಮೆತೆಡ್), ದೀರ್ಘಕಾಲಿಕ ಅಧ್ಯಯನ (ಲಾಂಜಿಟ್ಯೂಡಿನಲ್‍ಸ್ಟಡಿ-ಕೆಲವೇ ವ್ಯಕ್ತಿಗಳನ್ನು ಅನೇಕ ವರ್ಷಗಳ ಕಾಲ ಅಧ್ಯಯನ ಮಾಡುವುದು.), ಪ್ರಾತಿನಿಧಿಕ ಅಧ್ಯಯನ (ಕ್ರಾಸ್-ಸೆಕ್ಷನಲ್ ಸ್ಟಡಿ-ಏಕಕಾಲದಲ್ಲಿ ಅಥವಾ ಅತ್ಯಲ್ಪ ಅವಧಿಯಲ್ಲಿ ಅನೇಕರನ್ನು ಅಧ್ಯಯನ ಮಾಡುವುದು) ಈ ವಿಧಾನಗಳಲ್ಲಿ ಕೂಡ ಸ್ವಾಭಾವಿಕ ವೀಕ್ಷಣೆಯ ಸಾಧನಗಳನ್ನು ಬಳಸಲಾಗುತ್ತದೆ.

ದೊಡ್ಡ ಸಮೂಹದಿಂದ ಮಾಹಿತಿ ಸಂಗ್ರಹಿಸಬೇಕಾದಾಗ ಸರ್ವೇಕ್ಷಣ ತಂತ್ರ ಬಳಸಲಾಗುತ್ತದೆ. ವಸ್ತು ಸ್ಥಿತಿಯ ನೈಜ ಚಿತ್ರ ಪಡೆಯಲು ಇದು ಉತ್ತಮ ತಂತ್ರ ಪ್ರಶ್ನಾವಳಿಗಳು, ಅಭಿಪ್ರಾಯಗಳು, ತಪಶೀಲು ಪಟ್ಟಿಗಳು, ಪರೀಕ್ಷಣಗಳು ಮತ್ತು ಸಂದರ್ಶನಗಳು ಮಾಹಿತಿ ಸಂಗ್ರಹಿಸಲು ಬಳಸುವ ಸಾಧನಗಳು. ಕ್ಷೇತ್ರಾಧ್ಯಯನ ವಿಧಾನ. ದೀರ್ಘಕಾಲಿಕ ಅಧ್ಯಯನ ಮತ್ತು ಪ್ರಾತಿನಿಧಿಕ ಅಧ್ಯಯನದಲ್ಲಿ ಕೂಡ ಈ ಸಾಧನಗಳನ್ನು ಬಳಸಬಹುದು.

ಅಧ್ಯಯನ ವಸ್ತುವಾಗಬೇಕಾದ ವ್ಯಕ್ತಿಯನ್ನು ಚಿಕಿತ್ಸಾಲಯಕ್ಕೆ ಕರೆತಂದು ಅಲ್ಲಿ ಅವನ ವರ್ತನೆಯ ಆಳವಾಗಿ ಅಧ್ಯಯನ ಮಾಡುವುದಕ್ಕೆ ಚಿಕಿತ್ಸಾಲಯ ವಿಧಾನ (ಕ್ಲಿನಿಕಲ್) ಎಂದು ಹೆಸರು. ಈ ವಿಧಾನ ವರ್ತನ ದೋಷಗಳಿರುವ ವ್ಯಕ್ತಿಗಳ ಅಧ್ಯಯನಕ್ಕೆ ಅತ್ಯುತ್ತಮ. ವಿವಿಧ ಮಾನಸಿಕ ಪರೀಕ್ಷಣಗಳು ಸಂದರ್ಶನಗಳು ಸಾಮಾನ್ಯವಾಗಿ ಬಳಸುವ ಸಾಧನಗಳು. ಕೆಲವೊಮ್ಮೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ವ್ಯಕ್ತಿಯ ಜೀವನಚರಿತ್ರೆಯನ್ನು ಬರೆದು ಅವನ ವರ್ತನದೋಷಕ್ಕೆ ಕಾರಣ ಹುಡುಕಲು ಯತ್ನಿಸುತ್ತದೆ ಈ ವಿಧಾನ, ಇಂಥ ಸಂದರ್ಭಗಳಲ್ಲಿ ಇದನ್ನು ವ್ಯಕ್ತಿಚರಿತ್ರೆ ವಿಧಾನ, ವ್ಯಕ್ತಿ ಅಧ್ಯಯನ ವಿಧಾನ (ಕೇಸ್ ಹಿಸ್ಟರಿ ಮೆತೆಡ್ ಕೇಸ್ ಸ್ಟಡಿ ಮೆತೆಡ್) ಎಂದು ಕರೆಯುತ್ತಾರೆ.

ಪ್ರಾಯೋಗಿಕ ಚರಗಳೆಂದು (ಎಕ್ಸ್ ಪೆರಿಮೆಂಟಲ್ ವೇರಿಯೆಬಲ್ಸ್) ಕರೆಯಲಾಗುವ ಎರಡು ಚರಗಳ ನಡುವಿನ ಸಂಬಂಧವನ್ನು ನಿಖರವಾಗಿ ಪತ್ತೆ ಹಚ್ಚಲು ಪ್ರಯತ್ನಿಸುತ್ತದೆ ಪ್ರಯೋಗ ವಿಧಾನ. ಪ್ರಾಯೋಗಿಕ ಚರಗಳನ್ನು ಬಿಟ್ಟು ಉಳಿದ ಎಲ್ಲ ಸುಸಂಗತ ಚರಗಳನ್ನು ಸ್ಥಿರವಾಗಿ ಇಟ್ಟು, ಸ್ವತಂತ್ರ ಚರವನ್ನು ಪೂರ್ವಯೋಜಿತ ರೀತಿಯಲ್ಲಿ ಬದಲಿಸಿ ಪರತಂತ್ರ ಚರದಲ್ಲಿ ಆಗುವ ಬದಲಾವಣೆಗಳನ್ನು ವೀಕ್ಷಿಸುವುದು ಪ್ರಯೋಗ ವಿಧಾನದ ವೈಶಿಷ್ಟ್ಯ. ಎಲ್ಲ ಸುಸಂಗತ ಚರಗಳನ್ನು ನಿಯಂತ್ರಿಸಲು ಕಷ್ಟವಾದರೆ, ಸಂಖ್ಯಾಕಲನಾತ್ಮಕ ನಿಯಂತ್ರಣ ಬಳಸಿ, ಪ್ರಯೋಗ ಕರ್ತೃ ಎರಡು ಅಥವಾ ಹೆಚ್ಚು ಚರಗಳ ನಡುವಿನ ಅನ್ಯೋನ್ಯ ಕ್ರಿಯೆಯನ್ನು ಅಧ್ಯಯನ ಮಾಡುತ್ತಾನೆ. ಪರಸ್ಪರ ಸರಿ ಜೋಡಿಯಾದ (ಮ್ಯಾಚ್ಡ್) ಅಥವಾ ಸಮಾನ (ಈಕ್ವಿವಲೆಂಟ್) ಗುಂಪುಗಳನ್ನು ಮಾಡುವುದರ ಮೂಲಕ ಅಧ್ಯಯನಕ್ಕೆ ಒಳಪಡದ ಚರಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದು ಮನೋವಿಜ್ಞಾನದ ವೈಶಿಷ್ಟ್ಯ. ಪ್ರಯೋಗದ ಸಮಗ್ರ ಯೋಜನೆಗೆ ಪ್ರಯೋಗ ಆಲೇಖ್ಯ(ಎಕ್ಸ್ ಪೆರಿಮೆಂಟಲ್ ಡಿಸೈನ್) ಎಂದು ಹೆಸರು. ಪ್ರಯೋಗ ವಿನ್ಯಾಸ ತಯಾರಿಸಲು ಹಲವು ನಿಯಂತ್ರಣ ಕಾರ್ಯವಿಧಾನಗಳು ಸಹಾಯಮಾಡುತ್ತವೆ. ಅವುಗಳಲ್ಲಿ ಕೆಲವು ಇಂತಿವೆ: 1. ಸಮತೂಕ ತಂತ್ರಗಳು (ಉದಾ: ಅಭ್ಯಾಸ ಮತ್ತು ಆಯಾಸ ನಿಯಂತ್ರಿಸಲು), 2. ಏಕ-ಛದ್ಮ ಮತ್ತು ದ್ವಿ-ಛದ್ಮ (ಸಿಂಗಲ್ ಬ್ಲೈಂಡ್, ಡಬಲ್ ಬ್ಲೈಂಡ್) ಕಾರ್ಯವಿಧಾನಗಳು (ಉದಾ:) ಪ್ರಯೋಗ ಕರ್ತೃವಿನ ಪ್ರಭಾವ ಮತ್ತು ಪ್ರಯೋಗಕ್ಕೆ ಒಳಪಡಿಸಿದ ವ್ಯಕ್ತಿಯ ಮಾನಸಿಕ ಸಿದ್ಧತಾ ಸ್ಥಿತಿ ನಿಯಂತ್ರಿಸಲು), 3. ಪ್ರಾಣಿ ವರ್ತನೆಯ ಬಗ್ಗೆ ಸಂಶೋಧನೆಗಳು (ಉದಾ: ಅನುವಂಶಿಕ, ಶರೀರಕ್ರಿಯೆಯ, ಪರಿಸರದ ಕಾರಕಗಳನ್ನು ನಿಯಂತ್ರಿಸಲು).
ಸಂಗ್ರಹಿಸಿದ ಮಾಹಿತಿಯ ವಿಶ್ಲೇಷಣೆಗೆ, ಮಾಹಿತಿ ಆಧರಿಸಿ ಕೈಗೊಳ್ಳಬಹುದಾದ ತೀರ್ಮಾನ ಕೈಗೊಳ್ಳಲು ಮತ್ತು ಅದರ ವಿಶ್ವಾಸನೀಯತೆ ನಿರ್ಧರಿಸಲು ಸಂಖ್ಯಾಕಲನವಿಜ್ಞಾನದ ತಂತ್ರಗಳನ್ನು ಮನೋವಿಜ್ಞಾನಿ ಉಪಯೋಗಿಸುತ್ತಾನೆ. ಅನೇಕ ಅಧ್ಯಯನಗಳಲ್ಲಿ ಮನೋವಿಜ್ಞಾನಿ ಈ ಮೇಲೆ ನಮೂದಿಸಿದ ವಿಧಾನಗಳಲ್ಲಿ ಎರಡು ಅಥವಾ ಹೆಚ್ಚನ್ನು ಬಳಸುತ್ತಾನೆ.

ಕೆಲವು ಸನ್ನಿವೇಶಗಳಲ್ಲಿ ಅಂತರಾವಲೋಕನ (ಇಂಟ್ರಾಸ್ಟೆಕ್ಷನ್) ತಂತ್ರವನ್ನು ಬಳಸುವುದು ಮನೋವಿಜ್ಞಾನದ ವಿಶಿಷ್ಟತೆ. ವ್ಯಕ್ತಿ ತನ್ನ ಒಳಗಣ್ಣಿನಿಂದ ತನ್ನ ಮನಸ್ಸಿನ ಆಗುಹೋಗುಗಳನ್ನು ತಾನೇ ಪರಿಶೀಲಿಸಿ ವರದಿ ಮಾಡುವ ವಿಧಾನ ಇದು. ಈ ವಿಧಾನ ಮಿತಿಗಳು ಅನೇಕ. ಆದ್ದರಿಂದ ಬಲು ಹಿಂದೆ ಮನೋವಿಜ್ಞಾನದ ಪ್ರಧಾನ ವಿಧಾನವಾಗಿದ್ದ ಅಂತರಾವಲೋಕನ ಇಂದು ಕೆಲವು ಅಧ್ಯಯನಗಳಲ್ಲಿ ಮುಂದೆ ಶ್ರಮಿಸಬೇಕಾದ ಹಾದಿಯ ಸುಳುಹು ಪಡೆಯಲು ಮಾತ್ರ ಉಪಯೋಗಿಸಲ್ಪಡುತ್ತದೆ.
(ಎನ್.ಎ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ